ನಿಜಾಮಿ
	ಸ. 1140-1204. ಒಬ್ಬ ಪ್ರಸಿದ್ಧ ಪಾರಸೀ ಕವಿಯ ಕಾವ್ಯನಾಮ. ಇವನ ಪೂರ್ಣ ಹೆಸರು ನಿಜಾಮ್-ಉದ್-ದೀನ್ ಅಬೂ ಮುಹಮ್ಮದ್ ಉರಫ್ ಯೂಸುಫ್. ಬಾಲ್ಯದಲ್ಲಿಯೆ ತಂದೆ ತೀರಿದುದರಿಂದ ಕಕ್ಕನ ಪೋಷಣೆಯಲ್ಲಿ ಬೆಳೆದ. ಈತನಿಗೆ ಮೂವರು ಹೆಂಡಿರು, ಒಬ್ಬ ಮಗ. ಆತನ ಹೆಸರು ಮುಹಮ್ಮದ್. ಕಿವಾಮಿಮುತ್‍ರೀಜೀ ಎಂಬ ಕಾವ್ಯನಾಮದಿಂದ ಕವಿತೆ ಬರೆಯುವ ಒಬ್ಬ ಸೋದರನಿದ್ದ. ನಿಜಾಮಿಯದು ಶಾಂತಜೀವನ. ಆಸ್ಥಾನಕವಿಯಾದರೂ ಜರ್ಬು ಜೋಕುಗಳಿಂದ ದೂರ. ಬರೆದ ಕಾವ್ಯಗಳೆಲ್ಲವನ್ನೂ ಸುಮಾರಾಗಿ ಸಮಕಾಲೀನ ರಾಜರುಗಳಿಗೆ ಸಮರ್ಪಿಸಿದ.

	ನಿಜಾಮಿಯ ಪ್ರಸಿದ್ಧ ಕೃತಿ ಖಮ್ಸಾ ಎಂಬುದು ಪಂಚಕಾವ್ಯಗಳ ಒಂದು ಗುಚ್ಫ: 1 ಮಖ್‍ಜಿನುಲ್ ಇಸ್‍ರಾರ್ (1165-66), 2. ಶಿರೀನ್ ಅಥವಾ ಖುಸ್ರೂ (1175-76), 3. ಲೈಲಾ ಮಜ್ನೂ (1188-89), 4. ಸಿಕಂದರ್ ನಾಮಾ(1199), 5. ಹಾಲ್ತ ಪಾಯಕಾರ್ (1198-99).

	ಇವುಗಳಲ್ಲಿನ ಮೊದಲ ಕಾವ್ಯದಲ್ಲಿ ವಿಶೇಷತಃ ನೈತಿಕ ಆಚಾರ ಮತ್ತು ರಹಸ್ಯವಾದ ಸಂಗತಿಗಳನ್ನು ಆದರ್ಶಕಥೆಗಳ ಮೂಲಕ ವ್ಯಕ್ತಪಡಿಸಿದೆ. ಇದಕ್ಕೆ ಬಹ್‍ರಾಮ್ ಶಾಹ 6,000 ಅಪ್ರಷಿಗಳನ್ನು ಕೊಟ್ಟನಂತೆ.

	ಎರಡನೆಯದು ಪ್ರಣಯ ಕಾವ್ಯ. ಇದರಲ್ಲಿ ಫರ್‍ಹಾದ್ ಹಾಗೂ ಫಾರಸ್ ದೇಶದ ಸಮ್ರಾಟ ಖುಸ್ರೂ ಪರ್‍ವೇಜ್ ಮತ್ತು ಆತನ ಪ್ರತಿಭಾಶಾಲಿ ಹೆಂಡತಿ ಶೀರೀನ್ ಇವರ ಪ್ರೇಮವನ್ನು ವರ್ಣಿಸಿದೆ.

	ಮೂರನೆಯದು ಅರೇಬಿಯದ ಪೌರಾಣಿಕ ಕಥೆಗಳನ್ನು ಆಧರಿಸಿ ಬರೆದ ಇನ್ನೊಂದು ಪ್ರಣಯ ಕಾವ್ಯ. ಕವಿ ಈ ಕಾವ್ಯವನ್ನು ಶೇರ್‍ವಾನ್‍ಶಾಹ್ ಅಖಿಸ್ತಾನ್ ಮಿನುಚಿಹಜ್‍ನ ವಿಶೇಷ ಆದೇಶದ ಮೇರೆಗೆ ಬರೆದು ಅವನಿಗೇ ಸಮರ್ಪಿಸಿದ್ದಾನೆ. ಸಣ್ಣ ನಾವೆಯಲ್ಲಿ ಕುಳಿತು ಪ್ರವಾಸ ಮಾಡಿದ ಅಮೀರನ ಕತೆಗಳು ಸುವಿಖ್ಯಾತ. ಲೈಲಾ ಮತ್ತು ಮಜ್ನೂ ನಿಜಪ್ರೇಮದ ಪ್ರತೀಕಗಳಾಗಿ ಪ್ರಪಂಚದಲ್ಲೇ ಪ್ರಸಿದ್ಧರಾಗಿದ್ದಾರೆ.

	ನಾಲ್ಕನೆಯ ಕಾವ್ಯ ಗರಖ್‍ನಾಮಾ ಅಥವಾ ಇಖ್‍ಬಾಲ್‍ನಾಮಾ ಮತ್ತು ಖಿಜ್ರನಾಮಾ ಎಂಬ ಎರಡು ಭಾಗಗಳಲ್ಲಿದೆ. ಗ್ರೀಕ್ ಸಾಮ್ರಾಟ ಸಿಕಂದರನ (ಅಲೆಕ್ಸಾಂಡರ್) ಜೀವನದಲ್ಲಿನ ಮಹತ್ತ್ವಪೂರ್ಣ ಘಟನೆಗಳನ್ನು ಇಲ್ಲಿ ವರ್ಣಿಸಲಾಗಿದೆ. ಈ ಘಟನೆಗಳು ಮನೋಹರವೂ ಅದ್ಭುತರಸಭರಿತವೂ ಆಗಿವೆ. ಮತ್ತೆ ಇಲ್ಲಿನ ಅನೇಕ ಘಟನೆಗಳಲ್ಲಿ ದಾರ್ಶನಿಕ ಉಪದೇಶಗಳು ತುಂಬಿ ತುಳುಕುತ್ತಿವೆ. ಈ ಕತೆಗಳಲ್ಲಿ ಅರೇಬಿಯಾಕ್ಕೆ ಹೆಚ್ಚಿನ ಸ್ಥಾನ ದೊರಕಿದೆ. ಅಲ್ಲಿಯ ಜನಜೀವನ ಸುಂದರವಾಗಿ ಚಿತ್ರಿತವಾಗಿದೆ.

	ಐದನೆಯ ಕೃತಿಗೆ ಆಧಾರ ಪಾರಸೀ ದೇಶದ ಪೌರಾಣಿಕ ಅರಸನೊಬ್ಬನ ಪ್ರೇಮಬಂಧದ ವಿಷಯ. ಕಥಾನಾಯಕ ಬಹರಾಮ್ ಗೌರ್. ನಾಯಕಿಯರು ಆತನ ಏಳು ಮಂದಿ ರಾಣಿಯರು, ಅವರಲ್ಲಿ ಒಬ್ಬೊಬ್ಬರೂ ನಾಯಕನಿಗೆ ಬಹು ರಂಜಕವಾದ ಒಂದೊಂದು ಕಥೆ ಹೇಳುತ್ತಾರೆ.

	ಮಸ್ನವೀ ರಚನೆಯಲ್ಲಿ ನಿಜಾಮಿ ಮೂರನೆಯ ಸಮ್ರಾಟನೆಂದು ಪ್ರಸಿದ್ಧಿ. ಇವನದು ಶಕ್ತಿಯುತ ಶೈಲಿ. ಅದು ದೇಶೀಯ ಪದಪುಂಜಗಳಿಂದ ಸರಳವೂ ಮನೋಹರವೂ ಆಗಿದೆ. ಫಿರ್ದೌಸಿಯ ಭಾಷೆ ಅರಬ್ಬೀ ಶಬ್ದಗಳಿಂದ ಕೂಡಿ ಕಿಂಚಿತ್ ಜಟಿಲವೆಂದೂ ನಿಜಾಮಿಯದು ಅಂತಲ್ಲವೆಂದೂ ವಿದ್ವಾಂಸರ ಮತ. ಇವನ ಕಾವ್ಯಗಳಲ್ಲಿ ನೀತಿ ಕಾಂತಾಸಮ್ಮಿತ ಸ್ವರೂಪ ತಳೆದಿದೆ. ಶೃಂಗಾರರಸಪ್ರಧಾನವಾದ ಕಾವ್ಯಗಳನ್ನು ಬರೆದವರಲ್ಲಿ ಇವನದು ಎತ್ತಿದ ಕೈ. ಇರಾನಿನ ಪ್ರತಿಷ್ಠಿತ ಸಾಹಿತ್ಯದಲ್ಲಿ ನಿಜಾಮಿಯ ಖಮ್ಸಾಕ್ಕೆ ಉಚ್ಚಸ್ಥಾನ ದೊರಕಿದೆ. ಇದರ ಮೇಲೆ ಅನೇಕ ವ್ಯಾಖ್ಯಾನಗಳು ಟಿಪ್ಪಣಿಗಳು ಬಂದಿವೆ. ದೆಹಲಿಯ ಅಮೀರ್ ಖೂಸ್ರೂ ಮತ್ತು ಬಾಗೌದಾದಿನ ಫುಜಲೀಗಳ ಮೇಲೆ ಇವನ ವಿಶೇಷ ಪ್ರಭಾವ ಮೂಡಿದೆ. ತನ್ನ ತರುವಾಯದ ಕಾಲದ ಪಾರಸೀ ಸಾಹಿತ್ಯ ಮತ್ತು ತತ್ ಸಂಪರ್ಕ ಉಳ್ಳ ಇತರ ಸಾಹಿತ್ಯಗಳ ಮೇಲೆ ನಿಜಾಮಿ ತನ್ನದೇ ಆದ ಮುದ್ರೆಯನ್ನು ಮೂಡಿಸಿದ್ದಾನೆ.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ